ಪಿಚ್‍ಬ್ಲೆಂಡ್
ಯುರೇನಿಯಮ್ಮಿನ ಮುಖ್ಯ ಖನಿಜ. ಸಾಧಾರಣವಾಗಿ ಮುದ್ದೆ ರೂಪದಲ್ಲಿ ಗೊತ್ತಾದ ವಿಶೇಷ ಆಕಾರವೇನೂ ಇಲ್ಲದೆ ದೊರಕುತ್ತದೆ. ಇದರ ಹರಳಿನ ರೂಪವೇ ಯುರಾನಿನೈಟ್. ಬಣ್ಣ ಕಪ್ಪು, ಕಬ್ಬಿಣದಂತೆ ಕಂದು, ಇಲ್ಲವೇ ನಸ್ಯ ಪುಡಿಯ ರೂಪದಲ್ಲಿ ನಸ್ಯ ಬಣ್ಣ ತಳೆಯುತ್ತದೆ. ಡಾಮರಿನಂತೆ ಹೊಳಪುಂಟು. ಗಾಜಿನಂತೆ ಗಟ್ಟಿ. ಪಿಚ್‍ಬ್ಲೆಂಡಿನಲ್ಲಿ 90% ಯುರೇನಿಯಮ್ ಆಕ್ಸೈಡ್ ಇರುತ್ತದೆ; ತೋರಿಯಮ್ ಮತ್ತು ಅಪೂರ್ವ ಲೋಹಾಮ್ಲಗಳು 1.5% ನ್ನೂ ಮೀರುವುದಿಲ್ಲ. ನೀರಿನ ಸಂಪರ್ಕದಿಂದ ಪಿಚ್‍ಬ್ಲೆಂಡ್ ಬೇಗ ರೂಪಾಂತರಗೊಳ್ಳುತ್ತದೆ. ಆಗ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಹೊಸ ಖನಿಜಗಳು ಉತ್ಪತ್ತಿಯಾಗುತ್ತವೆ. ಅವುಗಳ ಪೈಕಿ ಕೆಂಪು ಬಣ್ಣದ ಗಮೈಟ್, ಹಳದಿ ಬಣ್ಣದ ಅಟುನೈಟ್ ಮತ್ತು ಹಸಿರು ಬಣ್ಣದ ಟಾರ್ಬನೈಟ್ ಮುಖ್ಯವಾದವು. ಗ್ರಾನೈಟ್ ಜಾತಿಗೆ ಸೇರಿದ ಪೆಗ್ಮಟೈಟ್ ಶಿಲೆ ಪಿಚ್‍ಬ್ಲೆಂಡಿನ ಪ್ರಧಾನ ಆಕರ. ಆದರೆ, ಇದು ಹೆಚ್ಚಿನ ಮೊತ್ತದಲ್ಲಿ ಸಿಕ್ಕುವುದಿಲ್ಲ. ಹೆಚ್ಚಾಗಿ ಪಿಚ್‍ಬ್ಲೆಂಡ್ ಗಂಧಕ, ತಾಮ್ರ, ನಿಕಲ್ ಮತ್ತು ಕೋಬಾಲ್ಟ್ ಅದುರುಗಳ ಜೊತೆ ಎಳೆಗಳ ರೂಪದಲ್ಲಿ ದೊರೆಯುತ್ತದೆ. ನೀರಿನ ಸಂಪರ್ಕದಿಂದ ಬದಲಾಯಿಸಿದ ಪಿಚ್‍ಬ್ಲೆಂಡ್ ಮರಳು ಕಲ್ಲುಗಳಲ್ಲಿ ಮರಳಿನ ಕಣಗಳನ್ನು ಬಂಧಿಸುವ ದ್ರವ್ಯವಾಗಿ ಸಿಕ್ಕುತ್ತದೆ.
(ವೈ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ